ಹೊರ ಹೊಮ್ಮಲಿ ನೈಜ ಭಾವ ಸ್ಫುರಣ.
ನಿರಂತರವಾಗಲಿ ಪ್ರಕೃತಿ ಕಾವ್ಯ ಪಯಣ
ಆಗದು ಎಂದೆಂದು ಛಂದ ಪ್ರಾಸ ಹರಣ
ಪುಳಕಿತವು ನೋಡುವ ಕೇಳುವ ಕರಣ
ಚೈತ್ರ ವೈಶಾಖದಿ ವಸಂತ ಬರೆದ ಕಾವ್ಯ
ಮಧುಮಾಸದ ನಲ್ಮೆಯ ಶೃಂಗಾರ ಕಾವ್ಯ
ಜೇಷ್ಠ ಆಷಾಢದಿ ಗ್ರೀಷ್ಮ ರಚಿಸಿದ ಕಾವ್ಯ
ಶುಷ್ಕ ತರು ಲತೆಯ ಚಿತ್ತ ಚಿತ್ತಾರ ಕಾವ್ಯ
ಶ್ರಾವಣ ಭಾದ್ರಪದ ವರ್ಷವೈಭವ ಕಾವ್ಯ
ಆಶ್ವಯುಜ ಕಾರ್ತಿಕ ಶರತ್ಕಾಲದ ಕಾವ್ಯ
ನಾಡಹಬ್ಬ ದಸರೆಯ ಸಾಂಸ್ಕೃತಿಕ ಕಾವ್ಯ
ಮಾರ್ಗಶಿರ ಪುಷ್ಯಕೆ ಹೇಮಂತನ ಕಾವ್ಯ
ಮಾಘ ಫಾಲ್ಗುಣ ಶಿಶಿರ ತಂದಿಹ ಕಾವ್ಯ
ಚಳಿಯಲಿ ಮೈಮನ ಪುಳಕಿಸುವ ಕಾವ್ಯ
ಋತು ಮಾಸ ವಾರ ದಿನ ಕ್ಷಣದ ಕಾವ್ಯ
ನಿರತವೂ ಕಾಲನದಿ ಪ್ರವಹಿಸುವ ಕಾವ್ಯ
ಖಂಡ ದೇಶ ನಗರ ಹಳ್ಳಿ ವಂಶದ ಕಾವ್ಯ
ಏಳು ಬೀಳುಗಳ ಬಾಳ ಬಂಡಿಯ ಕಾವ್ಯ
ಅನುರಾಗವರಳಿದ ಒಲುಮೆಯ ಕಾವ್ಯ
ಅಳಿಸಿ ಉಳಿಸಿ ಬೆಳೆಸುವ ಪ್ರಕೃತಿ ಕಾವ್ಯ